ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶಪುರದಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸುದ್ದಿಯಲ್ಲಿದೆ. ಮದುವೆಯಾದ ನಂತರ ವಧುವನ್ನು ವರನ ಮನೆಗೆ ಕರೆದುಕೊಂಡು ಬಂದಾಗ, ಮೊದಲರಾತ್ರಿಯಲ್ಲೇ ಆಕೆ ವರನಿಂದ 90 ಲಕ್ಷ ರೂಪಾಯಿ ನಗದು ಬೇಡಿಕೆಯಿಟ್ಟಿದ್ದಾಳೆ ಎಂದು ವರನ ಕುಟುಂಬ ಆರೋಪಿಸಿದೆ.
ವರ ಕೋಣೆಗೆ ಪ್ರವೇಶಿಸಿದ ತಕ್ಷಣವೇ ವಧು, ಹಣ ನೀಡಿದರೆ ಮಾತ್ರ ವೈವಾಹಿಕ ಸಂಬಂಧಕ್ಕೆ ಅನುಮತಿ ನೀಡುವುದಾಗಿ ಹಠ ಹಿಡಿದಿದ್ದಾಳೆ. ವರ ಹಣ ನೀಡಲು ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ನಂತರ ವಿಷಯ ಎರಡೂ ಕುಟುಂಬಗಳಿಗೆ ತಿಳಿದು ದೊಡ್ಡ ಜಗಳಕ್ಕೆ ಕಾರಣವಾಯಿತು.
ಆರಂಭದಲ್ಲಿ ವರನ ಕುಟುಂಬಸ್ಥರು ವಧುವಿನ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ಒಪ್ಪದಿದ್ದರಿಂದ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಬಂದ ನಂತರ ವಧು ಮನೆಯಲ್ಲಿ ಗಲಾಟೆ ಮಾಡಿ, ವಸ್ತುಗಳನ್ನು ಒಡೆದು ಹಾಕಿ, ಗ್ಯಾಸ್ ಪೈಪ್‌ಲೈನ್ ಹಿಡಿದು ಎಲ್ಲರನ್ನು ಸಾಯಿಸುವ ಬೆದರಿಕೆ ಹಾಕಿದ್ದಾಳೆ ಎಂದು ವರನ ಕುಟುಂಬ ಆರೋಪಿಸಿದೆ.
ವರನ ಪೋಷಕರ ಹೇಳಿಕೆಯಂತೆ, ವಧು ಹಣದಾಸೆಗಾಗಿ ಮದುವೆಯಾಗಿದ್ದಾಳೆ. ಗಲಾಟೆಯ ನಂತರ ಆಕೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಇದರಲ್ಲಿ ವರನ ತಾಯಿ ನೀಡಿದ ಆಭರಣಗಳೂ ಸೇರಿವೆ ಎಂದು ಅವರು ತಿಳಿಸಿದ್ದಾರೆ.
ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೂ, ವರನ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ನಂತರ ನ್ಯಾಯಾಲಯದ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.