ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ಘಟನೆ ಅತ್ಯಂತ ಕರುಣಾಜನಕವಾಗಿದೆ. ಶಿವಣ್ಣ (40) ಎಂಬವರು ತಮ್ಮ ಇಬ್ಬರು ಮಕ್ಕಳಾದ ಜೀವನ್ (11) ಮತ್ತು ಪ್ರಾಣೇಶ್ (6) ಅವರನ್ನು ಉಸಿರುಗಟ್ಟಿಸಿ ಕೊಂದು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಣ್ಣ ಅವರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಮಾಡುತ್ತಿದ್ದರು ಹಾಗೂ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದರು. ಪತ್ನಿ ಕಾವ್ಯ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಒಂದು ವಾರದ ಹಿಂದೆ ಕಾವ್ಯ ಪರಪುರುಷನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಳು. ಈ ವಿಷಯಕ್ಕೆ ಶಿವಣ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೋಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಾವ್ಯ ಮತ್ತೆ ಗಂಡನ ಮನೆಗೆ ಬಂದು ಕ್ಷಮೆ ಕೇಳಿದ್ದಳು. ಆದರೆ, ಮಾರನೇ ದಿನ ಗಂಡ ಕೆಲಸಕ್ಕೆ ಹೋದಾಗ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಮತ್ತೆ ಓಡಿಹೋಗಿದ್ದಳು. ಇದರಿಂದ ಮನನೊಂದ ಶಿವಣ್ಣ, ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಬೆಳಕಿಗೆ ಬಂದಿದೆ. ಕೂಡಲೇ ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಣ್ಣ ಅವರ ಜೀವನದಲ್ಲಿ ಹಲವು ಬಾರಿ ಕುಟುಂಬ ಕಲಹಗಳು ನಡೆದಿದ್ದು, ಅಕ್ಕನ ಮಗ ಹೇಮಂತ್ ಜೊತೆ ಪತ್ನಿ ಕಾವ್ಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರವೂ ಹೊರಬಂದಿತ್ತು. ಈ ಕಾರಣಕ್ಕೆ ಶಿವಣ್ಣ ಹೇಮಂತ್‌ನ್ನು ಮನೆಯಿಂದ ಹೊರಹಾಕಿದ್ದರು. ಗ್ರಾಮಸ್ಥರು ಮಧ್ಯಸ್ಥಿಕೆ ಮಾಡಿಕೊಂಡು ಗಂಡ-ಹೆಂಡತಿ ಒಟ್ಟಾಗಿ ಇರಲು ಬುದ್ದಿ ಹೇಳಿದರೂ, ಮತ್ತೆ ಕಾವ್ಯ ಹೇಮಂತ್ ಜೊತೆ ಓಡಿಹೋಗಿದ್ದಳು.
ಈ ಎಲ್ಲ ಘಟನೆಗಳಿಂದ ಮನನೊಂದು, ಕೊನೆಗೆ ಶಿವಣ್ಣ ತನ್ನ ಇಬ್ಬರು ಮಕ್ಕಳನ್ನೂ ಕಳೆದುಕೊಂಡು ತಾನೂ ಜೀವ ತ್ಯಜಿಸಿರುವುದು ಗ್ರಾಮಸ್ಥರ ಮನಸ್ಸಿಗೆ ಆಘಾತ ತಂದಿದೆ.