ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ತಮ್ಮ ತಪೋಶಕ್ತಿಯಿಂದ ನುಡಿದ ಅನೇಕ ಭವಿಷ್ಯಗಳು ನಿಜವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಧಾರ್ಮಿಕ ಪ್ರವಚನಗಳ ಜೊತೆಗೆ ರಾಜಕೀಯ, ಸಾಮಾಜಿಕ ವಿಷಯಗಳ ಕುರಿತು ಕೂಡ ಅವರು ಭವಿಷ್ಯವಾಣಿ ಮಾಡುತ್ತಾ, ಜನರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ದೇಶದ ಭವಿಷ್ಯದ ಬಗ್ಗೆ ಅವರು ಭಯಾನಕ ಎಚ್ಚರಿಕೆ ನೀಡಿದ್ದಾರೆ.
ಶ್ರೀಗಳು ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ಅನ್ನ ಮತ್ತು ನೀರಿನ ಸಮಸ್ಯೆ ಎದುರಾಗಬಹುದು ಎಂದು ಹೇಳಿದ್ದಾರೆ. ಪ್ರಕೃತಿಯಲ್ಲಿ ಏರುಪೇರಾಗುವ ಸಾಧ್ಯತೆಗಳ ಬಗ್ಗೆ ಅವರು ಸೂಚಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿರುವ ಶ್ರೀಗಳು, ಸರಿ-ತಪ್ಪುಗಳನ್ನು ತಿದ್ದಿ ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಜನರಲ್ಲಿ ಹೆಚ್ಚುತ್ತಿರುವ ದೈವಾರಾಧನೆಯ ಪರಿಣಾಮವಾಗಿ ಮಳೆ-ಬೆಳೆ ಚೆನ್ನಾಗಿದ್ದು, ರಾಜ್ಯದ ಜನರು ಸಮೃದ್ಧ ಜೀವನ ನಡೆಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2026ರ ಬಗ್ಗೆ ಕೂಡ ಕೋಡಿಶ್ರೀಗಳು ಸ್ಫೋಟಕ ಭವಿಷ್ಯವಾಣಿ ಮಾಡಿದ್ದಾರೆ. ರಾಜಕೀಯದ ಚದುರಂಗದಾಟದ ಕುರಿತು ಅವರು ಮಾರ್ಮಿಕವಾಗಿ ಮಾತನಾಡಿ, ಹೊಸ ವರ್ಷ 2026 ಸಂತಸದಿಂದ ಕೂಡಿರುತ್ತದೆಯೋ ಅಥವಾ ಕಷ್ಟಗಳ ಸರಮಾಲೆಯಾಗುತ್ತದೆಯೋ ಎಂಬುದಕ್ಕೆ ಸಂಕ್ರಾಂತಿ ಫಲ, ಯಗಾದಿ ಫಲ ಎಂಬಂತೆ ವಿಭಿನ್ನ ಸೂಚನೆಗಳನ್ನು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಹಾಗೂ ಬೆಳಗಾವಿಯಲ್ಲಿ ನೀಡಿದ ಪ್ರವಚನಗಳಲ್ಲಿ, ಹವಾಮಾನ ವೈಪರೀತ್ಯದಿಂದ ಪ್ರಕೃತಿಯಲ್ಲಿ ಬದಲಾವಣೆಗಳು ಸಂಭವಿಸುತ್ತವೆ, ಅಪಮೃತ್ಯುಗಳು ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆದರೆ, ರಾಜ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಜನರು ದೈವಾರಾಧನೆಗಳಲ್ಲಿ ತೊಡಗಿರುವುದರಿಂದ ಮಳೆ, ಬೆಳೆಯಿಂದ ಸಮೃದ್ಧಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.