ಇತ್ತೀಚಿನ ದಿನಗಳಲ್ಲಿ ಸಂಸಾರ ಎಂಬ ಪವಿತ್ರ ಬಂಧನ ಕೇವಲ ದೈಹಿಕ ಹಸಿವು ಮತ್ತು ಕ್ಷಣಿಕ ಸುಖದ ಮಾರುಕಟ್ಟೆಯಾಗುತ್ತಿದೆ. ಮದುವೆಯಾದ ಮೇಲೆ ದೈವವೆಂದು ನಂಬಬೇಕಾದ ಗಂಡನನ್ನು ಬಿಟ್ಟು, ಹಳೆಯ ಪ್ರೇಮಿಯ ಜೊತೆ ಸೇರಿ ಸಂಚು ರೂಪಿಸುವ ಹೆಣ್ಣಿನ ಮನಸ್ಥಿತಿ ನಿಜಕ್ಕೂ ಭಯಾನಕ. ಪ್ರೀತಿ ಎಂಬ ಹೆಸರಿನಲ್ಲಿ ನಡೆಯುವ ಈ ಅಕ್ರಮ ಸಂಬಂಧಗಳು ಕೇವಲ ಒಂದು ಸಂಸಾರವನ್ನಲ್ಲ, ನಂಬಿಕೆಯನ್ನೇ ಮಣ್ಣು ಮಾಡುತ್ತಿವೆ
ಸುಚಿತ್ರಾ ಎಂಬ ಮಹಿಳೆ ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ ಭಟ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆಕೆಯ ಪತಿ ಮಹೇಶ್ ನಾಯ್ಕ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಪ್ರಕರಣದಿಂದ ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ ಚೌಡಪ್ಪ ನಾಯ್ಕ್ ಹಾಗೂ ಅವರ ಸಹಚರರು ಮಹೇಶ್ ನಾಯ್ಕ್ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.ದಾಳಿಯಲ್ಲಿ ಮಹೇಶ್ ನಾಯ್ಕ್, ವಸಂತ ನಾಯ್ಕ್ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ವಸಂತ ನಾಯ್ಕ್ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಘಟನೆ ಒಂದು ಕುಟುಂಬದ ಕಲಹದಿಂದ ಕೊಲೆ ಪ್ರಕರಣಕ್ಕೆ ತಿರುಗಿದೆ.
ಘಟನೆಯ ನಂತರ ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ, ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಇತರ ಅಪರಿಚಿತರು, ಎ4 ಕಮಲಾಕರ ಭಟ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಮಹೇಶ್ ನಾಯ್ಕ್ ಬೆಂಗಳೂರಿನಲ್ಲಿ ವಾಸವಾಗಿದ್ದರೆ, ಸುಚಿತ್ರಾ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಿದ್ದಾಪುರದಲ್ಲಿ ವಾಸಿಸುತ್ತಿದ್ದಳು. ಕಮಲಾಕರ ಭಟ್ ಅವರ ಪರಿಚಯದಿಂದ ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಅವರು ಕೆಲವೊಮ್ಮೆ ಸುಚಿತ್ರಾ ಮನೆಯಲ್ಲಿ ಉಳಿಯುತ್ತಿದ್ದರೆಂಬ ಆರೋಪವಿದೆ. ಇದರಿಂದ ಕಸಿವಿಸಿಕೊಂಡಿದ್ದ ಹಿರಿಯ ಮಗಳು ತಾಯಿಯ ವರ್ತನೆಯನ್ನು ಪ್ರಶ್ನಿಸಿದ್ದಳು. ಕೋಪಗೊಂಡ ಸುಚಿತ್ರಾ ಮಕ್ಕಳಿಗೆ ಹಿಂಸೆ ನೀಡಲು ಆರಂಭಿಸಿದ್ದಳು. ಕೊನೆಗೆ ಹಿರಿಯ ಪುತ್ರಿ ವಿಷಯವನ್ನು ತಂದೆಗೆ ತಿಳಿಸಿದ್ದಳು.
ಈ ಮಾಹಿತಿಯ ಆಧಾರದ ಮೇಲೆ ಮಹೇಶ್ ನಾಯ್ಕ್ ಊರಿಗೆ ತೆರಳಿ ದೂರು ದಾಖಲಿಸಿದ್ದರು. ನಂತರ ಸಹೋದರ ವಸಂತ್ ಮನೆಗೆ ತೆರಳಿದಾಗ, ಸುಚಿತ್ರಾ ಮತ್ತು ಆಕೆಯ ತಂದೆ ಗುಂಪು ಕಟ್ಟಿಕೊಂಡು ಅಲ್ಲಿಗೆ ಹೋಗಿ ಗಲಾಟೆ ನಡೆಸಿ, ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ಪರಿಣಾಮವಾಗಿ ವಸಂತ್ ನಾಯ್ಕ್ ಮೃತಪಟ್ಟಿದ್ದು, ಪ್ರಕರಣ ಕೊಲೆ ಆರೋಪದಡಿ ದಾಖಲಿಸಲಾಗಿದೆ.