“ಹನ್ನೆರಡು ವರ್ಷಗಳ ನಿರೀಕ್ಷೆ ಅಂತ್ಯ – ಬುಲ್ಡೋಜರ್ಸ್ ಮತ್ತೆ ಸಿಸಿಎಲ್ ಚಾಂಪಿಯನ್”!!

ಕೊಯಮತ್ತೂರಿನ ಎಸ್‌ಎನ್‌ಆರ್ ಕಾಲೇಜು ಮೈದಾನದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಅಂತಿಮ ಪಂದ್ಯವು ನಿಜಕ್ಕೂ ಚಲನಚಿತ್ರದ ಕ್ಲೈಮ್ಯಾಕ್ಸ್‌ನಂತೆ ಕಂಡಿತು. ಮೈದಾನದಲ್ಲಿ ಸಾವಿರಾರು ಅಭಿಮಾನಿಗಳು ಕೂಗಾಟ, ಹರ್ಷೋದ್ಗಾರಗಳಿಂದ ಗದ್ದಲಗೊಳಿಸುತ್ತಿದ್ದಾಗ, ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ತನ್ನ ಶಕ್ತಿ, ಶಿಸ್ತು ಮತ್ತು ಒಗ್ಗಟ್ಟಿನಿಂದ ಬೆಂಗಾಲ್ ಟೈಗರ್ಸ್ ವಿರುದ್ಧ 6 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.

“ಹನ್ನೆರಡು ವರ್ಷಗಳ ನಿರೀಕ್ಷೆ ಅಂತ್ಯ – ಬುಲ್ಡೋಜರ್ಸ್ ಮತ್ತೆ   ಸಿಸಿಎಲ್ ಚಾಂಪಿಯನ್”!!
“ಹನ್ನೆರಡು ವರ್ಷಗಳ ನಿರೀಕ್ಷೆ ಅಂತ್ಯ – ಬುಲ್ಡೋಜರ್ಸ್ ಮತ್ತೆ ಸಿಸಿಎಲ್ ಚಾಂಪಿಯನ್”!!

ಕೋಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಟೈಗರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜಾಯ್ ಮುಖರ್ಜಿ ಮತ್ತು ಉದಯ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದರು.

ಆದರೆ ಪಂದ್ಯದ ಎರಡನೇ ಓವರ್‌ನಲ್ಲಿಯೇ ಸುನೀಲ್ ಬೆಂಗಾಲ್‌ಗೆ ಆಘಾತ ನೀಡಿದರು. ಉದಯ್ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಕರ್ನಾಟಕ ಬುಲ್ಡೋಜರ್ಸ್‌ಗೆ ಮೊದಲ ಯಶಸ್ಸು ತಂದುಕೊಟ್ಟರು.

ಅದಾದ ನಂತರ ಕಳೆದ ಬಾರಿ ತಲೆನೋವಾಗಿದ್ದ ಮತ್ತು ಫೈನಲ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದ ಜ್ಯಾಮಿ ಕ್ರೀಸ್‌ಗೆ ಬಂದರು. ಈ ಬಾರಿಯೂ ಉತ್ತಮ ಫಾರ್ಮ್‌ನಲ್ಲಿದ್ದ ಜ್ಯಾಮಿ ಕರ್ನಾಟಕ ತಂಡಕ್ಕೆ ದೊಡ್ಡ ಸವಾಲಾಗಬಹುದು ಎನ್ನುವ ಭಯ ಅಭಿಮಾನಿಗಳಲ್ಲಿ ಇತ್ತು.

ಆದರೆ ಜೆಕೆ ಈ ಬಾರಿ ಜ್ಯಾಮಿಗೆ ಅಬ್ಬರಿಸುವ ಅವಕಾಶ ನೀಡಲಿಲ್ಲ. ಕೇವಲ ನಾಲ್ಕು ರನ್ ಗಳಿಸಿದ್ದ ಜ್ಯಾಮಿಯನ್ನು ಕ್ಲೀನ್ ಬೋಲ್ಡ್ ಮಾಡಿ ಬೆಂಗಾಲ್‌ಗೆ ಮತ್ತೊಂದು ಆಘಾತ ನೀಡಿದರು.

ಜ್ಯಾಮಿ ವಿಕೆಟ್ ಕಳೆದುಕೊಂಡ ನಂತರ ಬೆಂಗಾಲ್ ಟೈಗರ್ಸ್ ರನ್ ಗಳಿಸಲು ಪರದಾಡಿತು. 8 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಕೇವಲ 47 ರನ್‌ಗಳನ್ನು ಮಾತ್ರ ಗಳಿಸಿತು.9ನೇ ಓವರ್‌ನಲ್ಲಿ ಪ್ರತಾಪ್ ನಾರಾಯಣ್ 14 ರನ್‌ಗಳನ್ನು ಬಿಟ್ಟುಕೊಟ್ಟರೂ, ನಂತರ ತನ್ನ ಬೌಲಿಂಗ್‌ನಲ್ಲಿ ಶಿಸ್ತು ತೋರಿಸಿ ಒಟ್ಟಾರೆಯಾಗಿ 28 ರನ್ ನೀಡಿ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಬೆಂಗಾಲ್ ಟೈಗರ್ಸ್‌ಗಳ ಇನ್ನಿಂಗ್ಸ್‌ನ್ನು ಕುಸಿತಗೊಳಿಸಿದರು.

ಬೆಂಗಾಲ್ ಟೈಗರ್ಸ್ ಸ್ವಲ್ಪ ಲಯ ಕಂಡುಕೊಂಡಂತೆ ತೋರಿದಾಗಲೇ ನಾಯಕ ಜೀಶು ಸೇನ್‌ಗುಪ್ತಾ ಕೇವಲ 17 ರನ್‌ಗಳಿಸಿ ರನ್ ಔಟ್ ಆದರು. ನಾಯಕನ ವಿಕೆಟ್ ಕಳೆದುಕೊಂಡ ತಕ್ಷಣವೇ ತಂಡದ ಆತ್ಮವಿಶ್ವಾಸ ಕುಸಿದು, ಒಂದಾದ ಮೇಲೊಂದರಂತೆ ಆಟಗಾರರು ಪೆವಿಲಿಯನ್‌ಗೆ ಮರಳಿದರು.13ನೇ ಓವರ್ ವೇಳೆಗೆ ಬೆಂಗಾಲ್ ತಂಡವು 93 ರನ್‌ಗಳನ್ನು ಗಳಿಸಿತ್ತು. ಆದರೆ ಆ ನಂತರದ ಕೆಲವೇ ಓವರ್‌ಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ಬೆಂಗಾಲ್ ಟೈಗರ್ಸ್ 99 ರನ್‌ಗಳಲ್ಲೇ 8 ವಿಕೆಟ್ ಕಳೆದುಕೊಂಡು ಗಂಭೀರ ಸಂಕಷ್ಟಕ್ಕೆ ಸಿಲುಕಿತು.ಈ ಹಂತದಲ್ಲಿ ತಂಡದ ಇನ್ನಿಂಗ್ಸ್ ಸಂಪೂರ್ಣವಾಗಿ ಕುಸಿತದ ದಾರಿಯಲ್ಲಿ ಸಾಗುತ್ತಿದ್ದು, ಕರ್ನಾಟಕ ಬುಲ್ಡೋಜರ್ಸ್ ಬೌಲರ್‌ಗಳ ಒತ್ತಡಕ್ಕೆ ಬೆಂಗಾಲ್ ಆಟಗಾರರು ತತ್ತರಿಸಿದರು.

9ನೇ ವಿಕೆಟ್‌ಗೆ ಇಂದ್ರಶೀಶ್ ಮತ್ತು ಆನಂದ ಕ್ರೀಸ್‌ನಲ್ಲಿ ಸೇರಿ ತಂಡವನ್ನು ಗೌರವಯುತ ಸ್ಕೋರ್‌ನತ್ತ ಕರೆದೊಯ್ಯಲು ಪ್ರಯತ್ನಿಸಿದರು. ಇಬ್ಬರೂ ಒಟ್ಟಿಗೆ 30 ರನ್‌ಗಳ ಜೊತೆಯಾಟವಾಡಿ ಬೆಂಗಾಲ್‌ಗೆ ಸ್ವಲ್ಪ ನೆಮ್ಮದಿ ನೀಡಿದರು.ಬೆಂಗಾಲ್ ಪರವಾಗಿ ಜಾಯ್ ಮುಖರ್ಜಿ ಅತ್ಯಧಿಕವಾಗಿ 50 ರನ್ ಬಾರಿಸಿ ತಂಡದ ಇನ್ನಿಂಗ್ಸ್‌ಗೆ ಆಧಾರವಾದರು. ಆದರೆ ಫೈನಲ್ ತಲುಪುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಹುಲ್ ಮಜುಮ್ದಾರ್ ಅವರ ಬ್ಯಾಟ್ ಈ ಬಾರಿ ಮೌನವಾಗಿತ್ತು, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.ಅಂತಿಮವಾಗಿ, 20 ಓವರ್‌ಗಳಲ್ಲಿ ಬೆಂಗಾಲ್ ಟೈಗರ್ಸ್ ಸಂಪೂರ್ಣವಾಗಿ ಆಲ್‌ಔಟ್ ಆಗಿ 129 ರನ್‌ಗಳ ಮೊತ್ತಕ್ಕೆ ಸೀಮಿತವಾಯಿತು. ಈ ಕುಸಿತವು ತಂಡದ ಗೆಲುವಿನ ಕನಸನ್ನು ಮುರಿದು, ಕರ್ನಾಟಕ ಬುಲ್ಡೋಜರ್ಸ್‌ಗೆ ಜಯದ ದಾರಿ ಸುಗಮಗೊಳಿಸಿತು.

ಕಳೆದ ಸೀಸನ್‌ನಲ್ಲಿ ಅಬ್ಬರಿಸಿದ್ದ ಡಾರ್ಲಿಂಗ್ ಕೃಷ್ಣ ಈ ಬಾರಿ ಫೈನಲ್‌ನಲ್ಲಿ ನಿರಾಸೆ ಮಾಡಿದರು. 20 ಎಸೆತಗಳಲ್ಲಿ ಕೇವಲ 7 ರನ್‌ಗಳನ್ನು ಮಾತ್ರ ಗಳಿಸಿ ರತ್ನದೀಪ್ ಬೌಲಿಂಗ್‌ಗೆ ಬಲಿಯಾದರು. 13 ಓವರ್‌ಗಳ ವೇಳೆಗೆ ಕರ್ನಾಟಕ ಬುಲ್ಡೋಜರ್ಸ್ 4 ವಿಕೆಟ್ ಕಳೆದುಕೊಂಡು ನೂರು ರನ್‌ಗಳನ್ನು ಗಳಿಸಿದ್ದರೂ, ರಾಜೀವ್ ಹನು ಔಟಾದ ನಂತರ ಬೌಂಡರಿಗಳ ಬರ ಎದುರಿಸಿತು. ಬೆಂಗಾಲ್ ಬೌಲರ್‌ಗಳು ಕರ್ನಾಟಕ ಬ್ಯಾಟರ್‌ಗಳನ್ನು ಕಟ್ಟಿಹಾಕಿ ಒತ್ತಡ ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಅಂಪೈರ್ ಅನುಮತಿ ನೀಡದಿದ್ದರೂ ನಾಯಕ ಸುದೀಪ್ ಮೈದಾನಕ್ಕೆ ಬಂದು ಕ್ರೀಸ್‌ನಲ್ಲಿದ್ದ ಮಂಜುನಾಥ್ ಮತ್ತು ಜಯರಾಮ್ ಕಾರ್ತಿಕ್ ಜೊತೆ ಚರ್ಚೆ ನಡೆಸಿದರು. ಈ ನಡೆಗೆ ಬೆಂಗಾಲ್ ತಂಡ ಅಸಮಾಧಾನ ವ್ಯಕ್ತಪಡಿಸಿತು. ಒತ್ತಡದ ನಡುವೆ 48 ಎಸೆತಗಳ ನಂತರ ಜೆಕೆ ಬ್ಯಾಟ್‌ನಿಂದ ಬೌಂಡರಿ ಹೊರಬಂದಾಗ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿತು.ಕೊನೆಯ ಐದು ಓವರ್‌ಗಳಲ್ಲಿ ಕರ್ನಾಟಕಕ್ಕೆ ಇನ್ನೂ 17 ರನ್‌ಗಳ ಅವಶ್ಯಕತೆ ಇತ್ತು. 16ನೇ ಓವರ್‌ನಲ್ಲಿ 7 ರನ್‌ಗಳನ್ನು ಸೇರಿಸಿಕೊಂಡು, ಉಳಿದ 24 ಎಸೆತಗಳಲ್ಲಿ ಗೆಲುವಿಗೆ ಕೇವಲ 10 ರನ್‌ಗಳು ಬೇಕಾಗಿತ್ತು. ಅಂತಿಮವಾಗಿ ಮಂಜುನಾಥ್ ಎರಡು ಸತತ ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ಹನ್ನೆರಡು ವರ್ಷಗಳ ನಿರೀಕ್ಷೆಯ ನಂತರ ಕರ್ನಾಟಕ ಬುಲ್ಡೋಜರ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು, ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಈ ಜಯವು ತಂಡದ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣವಾಗಿ ಉಳಿಯಿತು.