ಜೈಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ದುರಂತ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಶಿಪ್ರಾ ಪಾತ್ ರಸ್ತೆಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ವರದಿಯಾಗಿದೆ. ಹರ್ಷಿಲ್ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.
ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ರಾತ್ರಿ 11.30ರ ಸುಮಾರಿಗೆ ಸಂಭವಿಸಿದ ಈ ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ತಕ್ಷಣವೇ ಕಾರಿನಲ್ಲಿ ಸಿಲುಕಿಕೊಂಡಿದ್ದ ಹರ್ಷಿಲ್ ಅವರನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು.
ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರು ಅತೀ ವೇಗದಲ್ಲಿ ಚಲಿಸುತ್ತಿತ್ತೇ ಅಥವಾ ಇನ್ನೊಂದು ವಾಹನ ಹಿಂದಿಕ್ಕಲು ಪ್ರಯತ್ನಿಸಿತ್ತೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಹರ್ಷಿಲ್ ಕಾಲಿಯಾ ನಟನೆ, ನಿರೂಪಣೆ ಮತ್ತು ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದರು. ಅವರು ‘ಕ್ರೈಮ್ ನೆಕ್ಸ್ಟ್ ಡೋರ್’ ವೆಬ್ ಸರಣಿಯಲ್ಲಿ ನಟಿಸಿದ್ದು, ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು. ಈ ಸರಣಿಯಲ್ಲಿ ಅನುಪ್ರಿಯಾ ಗೋಯೆಂಕಾ, ಯಶ್ಪಾಲ್ ಶರ್ಮಾ, ಸಾಹಿಲ್ ವೈದ್ ಮತ್ತು ವತ್ಸಲ್ ಶೇಠ್ ಅವರೊಂದಿಗೆ ಕೆಲಸ ಮಾಡಿದ್ದರು. ನಟನೆಯ ಜೊತೆಗೆ ಅವರು ಸುದ್ದಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.