ಬೆಂಗಳೂರು ಸಾರಕ್ಕಿ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ರಂಗಭೂಮಿ ನಟ ಮುರಳಿ ಅವರ ಮೃತದೇಹ ಪತ್ತೆಯಾದ ಘಟನೆ ಕಲಾ ಲೋಕವನ್ನು ಬೆಚ್ಚಿಬೀಳಿಸಿದೆ. ಸ್ಥಳೀಯರು ಮೃತದೇಹವನ್ನು ಕಂಡ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಜೆಪಿ ನಗರ ಠಾಣೆಯವರು ಸ್ಥಳಕ್ಕೆ ಬಂದು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಲೆಯೊಂದಿಗೆ ಬದುಕಿದ ಮುರಳಿ ಅವರು ಹಲವು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಟಕಗಳ ಜೊತೆಗೆ ಕಿರುಚಿತ್ರಗಳಲ್ಲಿಯೂ ತಮ್ಮ ಅದ್ಭುತ ಅಭಿನಯ ಕೌಶಲ್ಯವನ್ನು ತೋರಿಸಿ ಗುರುತಿಸಿಕೊಂಡಿದ್ದರು. ಪರಿಶ್ರಮಿ ಮತ್ತು ಶಿಸ್ತಿನ ಕಲಾವಿದರಾಗಿ ಸಹೋದ್ಯೋಗಿಗಳ ಮೆಚ್ಚುಗೆ ಪಡೆದ ಅವರು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುವ ಲಕ್ಷಣಗಳನ್ನು ಹೊಂದಿದ್ದರು.
ನಗುವಿನ ಹಿಂದಿನ ನೋವು ಮುರಳಿ ಅವರ ಈ ಹಠಾತ್ ನಿರ್ಧಾರ ಕಲಾ ಸಮುದಾಯಕ್ಕೆ ಆಘಾತ ತಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೂರೆ ಅವರು, “ರಂಗಶಂಕರದ ಬಳಿ ಎದುರಿಗೆ ಸಿಕ್ಕಾಗ ಹಾಯ್ ಹೇಳುತ್ತಿದ್ದ ಆ ನಗು ಈಗ ಮರೆಯಾಗಿದೆ. ನಗುವಿನ ಹಿಂದಿನ ನೋವು ಯಾರಿಗೂ ತಿಳಿಯಲಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.‘ಆತ್ಮಹತ್ಯೆಗೂ ಕೆಲವು ತಾಸು ಮೊದಲು ಮುರುಳಿ ಅವರು, ‘ನಾನು ಸರಿಯಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಜನ್ಮದಲ್ಲಿ ಮತ್ತೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟುತ್ತೇನೆ’ ಎಂಬುದಾಗಿ ಪೋಷಕರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.
ನಟ ವೆಂಕಟೇಶ್ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಬರೆದು, “ಸುಂದರ ಮುಖದ ಗೆಳೆಯ ಇಂದು ನಮ್ಮನ್ನೆಲ್ಲ ಬಿಟ್ಟೋದ. ತನ್ನ ನೋವನ್ನ ಒಂದೇ ಕ್ಷಣ ಹಂಚಿಕೊಂಡಿದ್ದರೂ ಪರಿಹಾರ ಹುಡುಕಬಹುದಿತ್ತು” ಎಂದು ಕಂಬನಿ ಮಿಡಿದಿದ್ದಾರೆ.
ಕಾರಣ ಇನ್ನೂ ನಿಗೂಢ ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತಿದ್ದ ಸಮಯದಲ್ಲಿಯೇ ಮುರಳಿ ಅವರು ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಎಲ್ಲರಿಗೂ ಅಚ್ಚರಿಯಾಗಿದೆ. ವೃತ್ತಿ ಬದುಕಿನ ಸಂಕಷ್ಟಗಳೋ ಅಥವಾ ವೈಯಕ್ತಿಕ ಸಮಸ್ಯೆಗಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ನಿಜವಾದ ಕಾರಣವನ್ನು ಪೊಲೀಸ್ ತನಿಖೆಯ ಮೂಲಕವೇ ತಿಳಿಯಬೇಕಿದೆ.
ಈ ಘಟನೆ ಕಲಾ ಲೋಕಕ್ಕೆ ತೀವ್ರ ಆಘಾತ ತಂದಿದ್ದು, ಮುರಳಿ ಅವರ ನೆನಪುಗಳು ರಂಗಭೂಮಿಯಲ್ಲೂ, ಕಿರುಚಿತ್ರಗಳಲ್ಲೂ ಸದಾ ಜೀವಂತವಾಗಿರಲಿವೆ.