ಕುಕನೂರ ತಾಲೂಕಿನ ಕೋಮಲಾಪುರ ಗ್ರಾಮದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಅವರ ವೈಯಕ್ತಿಕ ಬದುಕಿನ ವಿವಾದವು ಶಾಲಾ ಆವರಣದಲ್ಲೇ ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ. ತಮ್ಮ ಪತ್ನಿ ಪ್ರತಿದಿನ ಶಾಲೆಗೆ ಬಂದು ಕಿರಿಕ್ ಮಾಡುತ್ತಿರುವುದರಿಂದ ತಮ್ಮ ವೃತ್ತಿ ಬದುಕಿಗೆ ಮತ್ತು ಸಾರ್ವಜನಿಕ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶೆಟ್ಟರ್ ಅವರ ಹೇಳಿಕೆಯ ಪ್ರಕಾರ, ತಮ್ಮ ಪತ್ನಿ ಅವರನ್ನು ಮನೆಯಲ್ಲಿ ಕೈದಿ ತರಹ ಇಟ್ಟುಕೊಂಡಿದ್ದು, ಕುಟುಂಬದ ಸದಸ್ಯರೊಂದಿಗೆ ಅಥವಾ ಕಚೇರಿಯಿಂದ ಬರುವ ಯಾವುದೇ ಕರೆಗಳನ್ನು ಸ್ವೀಕರಿಸಲು ಬಿಡುತ್ತಿಲ್ಲ. ಇದಲ್ಲದೆ, ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿದ್ದು, ದೇಹದ ಮೇಲೆ ಗಾಯಗಳಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. “ಅವರಪ್ಪನ ಬಳಿ ವರದಕ್ಷಿಣೆ ತಗೊಂಡು ಬಾ” ಎಂದು ಒತ್ತಾಯಿಸುತ್ತಾ, ಸುಳ್ಳು ಆರೋಪಗಳನ್ನು ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತಾವು ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ಶೆಟ್ಟರ್ ತಿಳಿಸಿದ್ದಾರೆ. ತಮ್ಮ ಮಗ ಇಂಜಿನಿಯರಿಂಗ್ ಓದುತ್ತಿದ್ದರೂ, ಮೊದಲ ಪತ್ನಿ ಮತ್ತು ಮಕ್ಕಳ ಜೊತೆ ಇರಲು ಬಿಡುತ್ತಿಲ್ಲ ಎಂಬ ಅಸಹಾಯಕತೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ತಾವು ಮಾಸಿಕ ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದು, ಪತ್ನಿಯ ಕೈ ಬಿಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೂ, ಮಕ್ಕಳನ್ನು ಭೇಟಿ ಮಾಡಲು ಹೋದಾಗ ಅಥವಾ ಊರಿಗೆ ಹೋಗಲು ಬಯಸಿದಾಗ ಆಕೆ ತಕರಾರು ಮಾಡುತ್ತಾಳೆ ಎಂದು ಅವರು ಆರೋಪಿಸಿದ್ದಾರೆ.
ಶಾಲಾ ಆವರಣದಲ್ಲಿ ಪ್ರತಿದಿನ ಗಲಾಟೆ ಮಾಡುವುದರಿಂದ ತಮ್ಮ ಚಾರಿತ್ರ್ಯ ಹರಣವಾಗುತ್ತಿದೆ, ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಎದುರು ಗೌರವಕ್ಕೆ ಧಕ್ಕೆ ಬಂದಿದೆ ಎಂದು ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಬ್ಯಾಗ್ ಬಿಸಾಕುವುದು, ಮೊಬೈಲ್ ಕಿತ್ತುಕೊಳ್ಳುವುದು ಸೇರಿದಂತೆ ಸಾರ್ವಜನಿಕವಾಗಿ ಕಿರಿಕಿರಿ ಉಂಟುಮಾಡುತ್ತಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಹೀಗೆ ಬೆರೆಸಿದರೆ, ವೃತ್ತಿ ಬದುಕನ್ನು ಮುಂದುವರಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ರಸ್ತೆಯಲ್ಲಿ ಹೋಗುವಾಗ ಕಲ್ಲು ಎಸೆಯುವ ಮಟ್ಟಿಗೆ ಪರಿಸ್ಥಿತಿ ತಲುಪಿದೆ ಎಂದು ಶೆಟ್ಟರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.