ಮಹಾಶಿವರಾತ್ರಿಯ ಮಹತ್ವ
ಭಾರತೀಯ ಸನಾತನ ಧರ್ಮದಲ್ಲಿ ಮಹಾಶಿವರಾತ್ರಿ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಆಚರಿಸಲಾಗುವ ಈ ದಿನವು ಶಿವ ಮತ್ತು ಪಾರ್ವತಿಯ ಮಿಲನದ ಸಂಕೇತವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನದಂದು ಕೈಗೊಳ್ಳುವ ವಿಶೇಷ ಪೂಜಾ ವಿಧಾನಗಳು ಆರ್ಥಿಕ ಮುಗ್ಗಟ್ಟು, ಗ್ರಹದೋಷ ನಿವಾರಣೆ ಹಾಗೂ ಜೀವನದಲ್ಲಿ ಶಾಂತಿ ತರಲು ಸಹಾಯಕವಾಗುತ್ತವೆ.
ಅಭಿಷೇಕದ ಮಹಿಮೆ
ಶಿವಲಿಂಗಕ್ಕೆ ಭಕ್ತಿಯಿಂದ ಮಾಡುವ ಅಭಿಷೇಕವು ಅನೇಕ ಫಲಗಳನ್ನು ನೀಡುತ್ತದೆ.
ಕೇವಲ ಜಲದಿಂದ ಅಭಿಷೇಕ ಮಾಡಿದರೆ ಶಿವನು ಪ್ರಸನ್ನನಾಗುತ್ತಾನೆ.
ಹಾಲಿನಿಂದ ಅಭಿಷೇಕ ಮಾಡಿದರೆ ಆರ್ಥಿಕ ಪ್ರಗತಿ ಸಾಧ್ಯ.
ಮೊಸರಿನಿಂದ ಅಭಿಷೇಕ ಮಾಡಿದರೆ ಮಾನಸಿಕ ಶಾಂತಿ ದೊರೆಯುತ್ತದೆ.
ಜೇನುತುಪ್ಪದಿಂದ ಅಭಿಷೇಕ ಮಾಡಿದರೆ ದಾಂಪತ್ಯ ಸುಖ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ.
ತುಪ್ಪದಿಂದ ಅಭಿಷೇಕ ಮಾಡಿದರೆ ಸಂತಾನ ಭಾಗ್ಯ ದೊರೆಯುತ್ತದೆ.
ಪಾರ್ವತಿ ಮತ್ತು ಶಿವನನ್ನು ಜೊತೆಯಾಗಿ ಪೂಜಿಸಿದರೆ ಮನೆಯಲ್ಲಿ ಸೌಭಾಗ್ಯ ನೆಲೆಸುತ್ತದೆ.
ಮನೆಗೆ ತರಬೇಕಾದ ಪವಿತ್ರ ವಸ್ತುಗಳು
ಶಿವರಾತ್ರಿಯ ಪೂಜೆ ಮುಗಿಸಿ ಮನೆಗೆ ಹಿಂದಿರುಗುವಾಗ ಕೆಲವು ಪವಿತ್ರ ವಸ್ತುಗಳನ್ನು ತರುವುದು ಶುಭಕರ:
ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆಯನ್ನು ಪ್ರಸಾದವಾಗಿ ಮನೆಗೆ ತಂದು ಹಣ ಇಡುವ ಜಾಗದಲ್ಲಿ ಇಟ್ಟರೆ ಆರ್ಥಿಕ ಲಾಭವಾಗುತ್ತದೆ.
ಪಾರ್ವತಿ ದೇವಿಗೆ ಅರ್ಪಿಸಿದ ಕುಂಕುಮ ಮತ್ತು ಬಳೆಗಳನ್ನು ಸುಮಂಗಲಿಯರು ಧರಿಸಿದರೆ ದಾಂಪತ್ಯದಲ್ಲಿ ಪ್ರೀತಿ ಹೆಚ್ಚುತ್ತದೆ ಮತ್ತು ಅದೃಷ್ಟ ಒಲಿಯುತ್ತದೆ.
ತೀರ್ಥದ ಪ್ರೋಕ್ಷಣೆ
ಅಭಿಷೇಕ ಮಾಡಿದ ಜಲವನ್ನು ಕಲಶದಲ್ಲಿ ಸಂಗ್ರಹಿಸಿ ಮನೆಗೆ ತಂದು ನಾಲ್ಕು ಮೂಲೆಗಳಿಗೆ ಚಿಮುಕಿಸಿದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಅಲೆಗಳು ಹರಡುತ್ತವೆ. ಅನಾರೋಗ್ಯದಿಂದ ಬಳಲುತ್ತಿರುವವರ ಮೇಲೆ ಈ ನೀರನ್ನು ಪ್ರೋಕ್ಷಣೆ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಸೋಮವಾರದಂದು ಈ ಕಾರ್ಯ ಹೆಚ್ಚು ಫಲಪ್ರದವಾಗುತ್ತದೆ.
ಅಂತರಂಗದ ಶುದ್ಧೀಕರಣ
ಮಹಾಶಿವರಾತ್ರಿಯಂದು ಶಿವನಿಗೆ ಪ್ರಿಯವಾದ ದ್ರವ್ಯಗಳಿಂದ ಅಭಿಷೇಕ ಮಾಡುವುದು ಕೇವಲ ಧಾರ್ಮಿಕ ಕ್ರಿಯೆಯಲ್ಲ, ಅದು ಅಂತರಂಗದ ಶುದ್ಧೀಕರಣವೂ ಆಗಿದೆ. ಈ ದಿನದ ಜಾಗರಣೆಯು ಆಧ್ಯಾತ್ಮಿಕ ಜಾಗೃತಿಯನ್ನು ನೀಡುತ್ತದೆ. ಜಾತಕದಲ್ಲಿ ಚಂದ್ರದೋಷವಿರುವವರು ಶಿವಾರಾಧನೆ ಮಾಡಿದರೆ ಮಾನಸಿಕ ಧೃಡತೆ ಪಡೆಯುತ್ತಾರೆ. ಪೂಜೆಯ ನಂತರ ದಾನ-ಧರ್ಮಗಳಲ್ಲಿ ತೊಡಗುವುದು ಪುಣ್ಯದಾಯಕವೆಂದು ಪರಿಗಣಿಸಲಾಗಿದೆ.